ಆಡಮ್ಸ್, ಫ್ರಾನ್ಸಿಸ್ ವಿಲಿಯಂ ಲಾಡರ್‍ಡೇಲ್
(1862-1893). ಸ್ಕಾಚ್ ವಿಜ್ಞಾನಿ ಲೀತ್ ಆಡಮ್ಸನ ಮಗ. ಹುಟ್ಟಿದ್ದು ಮಾಲ್ಟಾ ದ್ವೀಪದಲ್ಲಿ. ಷ್ರೂಷ್‍ಬರಿಯ ಒಂದು ಖಾಸಗಿ ಶಾಲೆಯಲ್ಲೂ ಪ್ಯಾರಿಸ್ಸಿನಲ್ಲೂ ವಿದ್ಯಾಭ್ಯಾಸ ಮಾಡಿ ಇಂಗ್ಲೆಂಡಿನಲ್ಲಿ ಎರಡು ವರ್ಷ ಉಪಾಧ್ಯಾಯವೃತ್ತಿಯಲ್ಲಿ ತೊಡಗಿದ್ದು ತರುವಾಯ ಸ್ವಲ್ಪಕಾಲ ಕೆನಡಾದಲ್ಲಿದ್ದು, ಅನಂತರ ಆಸ್ಟ್ರೇಲಿಯಾಕ್ಕೆ ವಲಸೆಹೋಗಿ ನೆಲೆಸಿ ಸಿಡ್ನಿ ಬುಲೆಟಿನ್ ಎಂಬ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಕೆಲಸಕ್ಕೆ ಸೇರಿದ. ಅವನ ಕವನಗಳನೇಕ ಆ ಪತ್ರಿಕೆಯಲ್ಲಿ ಬೆಳಕು ಕಂಡವು. ವಾಸಿಯಾಗದಂಥ ಶ್ವಾಸಕೋಶದ ವ್ಯಾಧಿಯೊಂದಕ್ಕೆ ತುತ್ತಾಗಿ, ಸಹಿಸಲಾರದೆ ತನ್ನ ಮೂವತ್ತೊಂದನೆಯ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಉದ್ದಕ್ಕೂ ಅವನನ್ನು ಪೀಡಿಸುತ್ತಿದ್ದ ಅನಾರೋಗ್ಯವೂ ದಾರಿದ್ರ್ಯವೂ ಅವನ ಕೆಲವು ಕವಿತೆಗಳಲ್ಲಿ ವ್ಯಕ್ತವಾಗಿರುವ ಅತೃಪ್ತಿಯ ಮನೋಭಾವಕ್ಕೆ ಪ್ರೇರಕಗಳು. ಹೆನ್ರಿ ಅಂಡ್ ಅದರ್ ಟೇಲ್ಸ್ (1884), ಲೆಸ್ಟರ್ (1886), ಆಸ್ಟ್ರೇಲಿಯನ್ ಎಸ್ಸೇಸ್ (1886), ಪೊಯಿಟಿಕಲ್ ವಕ್ರ್ಸ್ (1886), ಸಾಂಗ್ಸ್ ಆಫ್ ದಿ ಆರ್ಮಿ ಆಫ್ ದಿ ನೈಟ್ (1888), ಟೈಬೀರಿಯಸ್ (1894)-ಇವು ಅವನ ಕೃತಿಗಳು. ಎರಡನೆಯ ಗ್ರಂಥ ಅವನ ಸ್ವಂತ ಜೀವನದ ಆಧಾರದ ಮೇಲೆ ರಚಿತವಾದ ಕಾದಂಬರಿ. ಕೊನೆಯದು ನಾಟಕ, ಪ್ರಕಟವಾದದ್ದು ಮರಣಾನಂತರ.

ಮೊದಲು ಕೇವಲ ವಲಸೆಗಾರರ ಬರಹಗಳಿಂದ ತುಂಬಿದ್ದ ಆಸ್ಟ್ರೇಲಿಯಾದ ಸಾಹಿತ್ಯಕ್ಕೆ ಒಂದು ವಿಶಿಷ್ಟರಾಷ್ಟ್ರೀಯತೆಯನ್ನು ನೀಡಿದವರಲ್ಲಿ ಈತ ಒಬ್ಬ.										
  (ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ